ತುಂಗಭದ್ರಾ ಯೋಜನೆ -
ತುಂಗಭದ್ರಾ ನದಿಗೆ ಅಡ್ಡಲಾಗಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮಲ್ಲಾಪುರದ ಬಳಿ ಅಣೆಯೊಂದನ್ನು ನಿರ್ಮಿಸುವುದರ ಮೂಲಕ ರೂಪಿಸಲಾದ ವಿವಿಧೋದ್ದೇಶ ಯೋಜನೆ, ಎರಡನೆಯ ಮಹಾಯುದ್ಧದ ಅನಂತರ ಅಂದಿನ ಮದರಾಸ್ ಮತ್ತು ಹೈದರಾಬಾದ್ ಸರ್ಕಾರಗಳ ಸಂಯುಕ್ತ ಪ್ರಯತ್ನದಿಂದ ಆರಂಭವಾದ ಇದರ ನಿಮಾಣ ಕಾರ್ಯ ಸ್ವತಂತ್ರ ಭಾರತದ ಪಂಚವಾರ್ಷಿಕ ಯೋಜನೆಗಳಿಗೆ ಹೊಂದಿಕೊಂಡು ಮುಂದುವರಿಯಿತು. ಈ ಯೋಜನೆಯ ಮುಖ್ಯ ಅಂಶಗಳು ಇವು : 1 ತುಂಗಭದ್ರಾ ನದಿಗೆ ಅಡ್ಡಲಾಗಿ ಮಲ್ಲಾಪುರದಲ್ಲಿ 133 ಟಿಎಮ್‍ಸಿ ಅಡಿ (133 ಸಾವಿರ ದಶಲಕ್ಷ ಘನಅಡಿ) ನೀರನ್ನು ಹಿಡಿಯುವ ಜಲಾಶಯ; 2 ಎಡ ದಂಡೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ 5.8 ಲಕ್ಷ ಎಕರೆಗೆ ನೀರನ್ನು ಒದಗಿಸುವ 14 ಮೈ. ಉದ್ದದ ನಾಲೆ. 3 ಬಲ ದಂಡೆಯಲ್ಲಿ 217 ಮೈ. ಉದ್ದವಾದ ಕೆಳಮಟ್ಟದ ನಾಲೆ; ಈ ನಾಲೆಯಿಂದ ಬಳ್ಳಾರಿ ಜಿಲ್ಲೆಯಲ್ಲಿ 92,435 ಎಕರೆಗಳಿಗೂ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ 1,56,913 ಎಕರೆಗಳಿಗೂ ನೀರಾವರಿ ಒದಗುತ್ತದೆ. 4 ಬಲದಂಡೆಯಲ್ಲಿ ಪೆನ್ನಾರ್ ಕಣಿವೆಯವರೆಗೆ 122 ಮೈ. ಉದ್ದದ ಮೇಲುಘಟ್ಟದ ನಾಲೆ, ಈ ನಾಲೆಯಿಂದ ಬಳ್ಳಾರಿ ಜಿಲ್ಲೆಯಲ್ಲಿ 2 ಲಕ್ಷ ಎಕರೆಗಳಿಗೂ ಆಂಧ್ರಪ್ರದೇಶದಲ್ಲಿ 24 ಲಕ್ಷ ಎಕರೆಗೂ ನೀರು ಒದಗಿಸುತ್ತದೆ. 5 ತುಂಗಭದ್ರಾ ಅಣೆಯ ಎಡ ಬಲಭಾಗಗಳ ಬುಡಗಳಲ್ಲಿ ಎರಡು ವಿದ್ಯುದುತ್ಪಾದನ ಕೇಂದ್ರಗಳಿವೆ. ಇವಲ್ಲದ ಪ್ರತ್ಯೇಕ ನಾಲೆಯೊಂದರಿಂದ ಹಾಯ್ದ ನೀರಿನಿಂದ ಹಂಪೆಯ ಬಳಿ ಇನ್ನೊಂದು  ವಿದ್ಯುದುತ್ಪಾದನ ಕೇಂದ್ರ ನಿರ್ಮಾಣವಾಗಿದೆ. ಅಣೆಯ ಬಳಿ ನದಿಯ ಜಲಾನಯನ ಭೂಮಿ 10,880 ಚ.ಮೈ.

	ತುಂಗಭದ್ರಾ ಅಣೆಯ ಐದು ಭಾಗಗಳಿವೆ: 1 ನದಿಯ ಮದ್ಯದಲ್ಲಿ ಕಲ್ಲುಗಾರೆಯ ಓಗೀ ಆಕಾರದ ಕೋಡಿ-2,300 ಅಡಿ; 2 ಎಡ ದಡದಲ್ಲಿ ಮುಂದುಗಡೆ 267 ಅಡಿ ಉದ್ದದ ಕಲ್ಲುಗಾರೆ; ಹಿಂದೆ ಮಣ್ಣಿನ ಏರಿ; 3 ಬಲ ದಡದಲ್ಲಿ 3,145 ಅಡಿ ಉದ್ದದ, ಮೇಲುನೀರು ಹರಿಯದ, ಅಣೆ. 4 ಮೊದಲನೆಯ ನೀರುನೆತ್ತಿಯಲ್ಲಿ ಓಗೀ ಅಣೆಯ ಎಡಗಡೆ 500 ಅಡಿ ಉದ್ದದ ಮಣ್ಣಿನ ಏರಿ. 5 ಎಡ ದಡದ ಕೊನೆಯಲ್ಲಿ 1,550 ಅಡಿ ಉದ್ದವಾದ ಮಣ್ಣಿನ ಏರಿ.

	ಆಳವಾದ ತಳಪಾಯದ ಮೇಲಿರುವ ಅಣೆಯ ಎತ್ತರ 162 ಅಡಿ. ತಳದಲ್ಲಿ ಅಗಲ 63ಳಿ  ಅಡಿ, ಮೇಲಿನ ಅಗಲ 22 ಅಡಿ. ಜಲಾಶಯದ ಗರಿಷ್ಠ ಮಟ್ಟ ಸಮುದ್ರ ಮಟ್ಟದಿಂದ 1,633  ಅಡಿ. ಜಲಾಶಯದಲ್ಲಿ 133 ಟಿಎಂಸಿ 	ಅಡಿ ನೀರು ನಿಲ್ಲುತ್ತದೆ. ನೀರು ಹರವಿನ ವಿಸ್ತೀರ್ಣ 146 ಚ.ಮೈ. ಜಲಾಶಯದಿಂದ ಮುಳುಗಡೆಯಾದ ಹಳ್ಳಿಗಳ ಸಂಖ್ಯೆ 73. 

	ಅಣೆಯಲ್ಲಿ 370 ಲಕ್ಷ ಘನ ಅಡಿ ಕಲ್ಲುಗಾರೆ ಸೇರಿದೆ. ಮುಂಭಾಗ ಮೇಲುಗಡೆಯಲ್ಲಿ ಲಂಬವಾಗಿದ್ದು ಕೆಳಗಡೆ 20ಕ್ಕೆ 1ರಂತೆ ಓಟವಾಗಿದೆ. ಹಿಂಭಾಗ ಮೇಲಿನ 20 ಅಡಿಗಳಲ್ಲಿ ಲಂಬವಾಗಿದ್ದು ನಯವಾದ ಬಾಗಿನಲ್ಲಿ ಇಳಿಯುತ್ತದೆ. ಅಣೆಯನ್ನು ಕಲ್ಲು ಮತ್ತು ಸುಣ್ಣ-ಸುರ್ಕಿ ಗಾರೆಯಿಂದ ಕಟ್ಟಿದ್ದಾರೆ. ಮುಂದಿನ ಮುಖದಿಂದ 17ಳಿ ಅಡಿ ಹಿಂದೆ 1,534 (ಆರ್.ಎಲ್.) ಅಡಿಗಳ ಮಟ್ಟದಲ್ಲಿ ತಳಪಾಯದಿಂದ ಅಣೆಯೊಳಗೆ ಜಿನುಗಿದ ನೀರನ್ನು ಸಾಗಿಸುವುದಕ್ಕೂ ತನಿಖೆಗೂ 5 ಅಡಿ ಅಗಲ 2ಳಿ  ಅಡಿ ಎತ್ತರದ ಗೂಡನ್ನು ಉದ್ದಕ್ಕೂ ನಿರ್ಮಿಸಿದೆ. ತಳದಲ್ಲಿ ಹೊಳೆಯ ಕಡೆಗೆ 1 ಅಡಿ ಆಳವಾದ ಚರಂಡಿಯನ್ನು ಕಲ್ಲುಗಾರೆಯಿಂದ ಕಟ್ಟಿದೆ. ಜಿನುಗಿದ ನೀರನ್ನು ಅದರಲ್ಲಿ ಕೂಡಿಸಿ ಪಂಪುಗಳಿಂದ ಮೇಲಕ್ಕೆ ಎತ್ತುತ್ತಾರೆ.

	1613 ಅಡಿಯ (ಆರ್.ಎಲ್.) ಮಟ್ಟದಲ್ಲಿ 60 ಅಡಿ ಅಗಲ  20 ಅಡಿ ಎತ್ತರದ 33 ಕೋಡಿ ಬಾಗಿಲುಗಳಿವೆ. ಕೋಡಿ ಓಗೀ ಆಕಾರವಾಗಿದ್ದು ಕೆಳಗಡೆ ಬಾಗಿದ ಬಕೆಟ್ಟು, ಅದರ ಹಿಂದುಗಡೆ ತಗ್ಗಿಸಿದ ನದೀತಳ, 100 ಅಡಿ ಅಗಲದ ಕಲ್ಲುಗಾರೆಯ ನೆಲಹಾಸು ಇವೆ. ಕೋಡಿಯ ಕಂಬಗಳ ಅಗಲ 10 ಅಡಿ, ಮೇಲುಗಡೆ 22  ಅಡಿ ಅಗಲವಾದ ರಸ್ತೆಯುಳ್ಳ ಸೇತುವೆಯಿದೆ. ನೀರು ಉರುಳದೆ ಇರುವ ಕೋಡಿಯ ಮೇಲೂ ಈ ಸೇತುವೆ ಇದೆ.

	ಇದುವರೆಗೆ ಹೊಳೆಯಲ್ಲಿ ಬಂದ ಮಹಾಪ್ರವಾಹ 3.3 ಲಕ್ಷ ಕ್ಯೂಸೆಕ್ಸ್‍ಗಳು. ಆದರೆ ಕೋಡಿಯನ್ನು 6.5 ಲಕ್ಷ ಕ್ಯೂಸೆಕ್ಕುಗಳ ಮಹಾಪ್ರವಾಹವನ್ನು ಸುರಕ್ಷಿತವಾಗಿ ಸಾಗಿಸುವಂತೆ ವ್ಯವಸ್ತೆ ಮಾಡಿದೆ. ಕೋಡಿಯ ಒಂದೊಂದು ಬಾಗಿಲೂ 50 ಟನ್ ತೂಕವಾಗಿದೆ. 

ಮಣ್ಣಿನ ಏರಿಗೆ ಮುಂಭಾಗದ ಇಳಿಕಲಿನಲ್ಲಿ ಕಲ್ಲುಕಟ್ಟಣೆಯನ್ನೂ ಹಿಂಭಾಗದಲ್ಲಿ ಹೆಪ್ಪನ್ನೂ ಕಟ್ಟಿದೆ. ಸಂಕೀರ್ಣ ನಮೂನೆಯ ಅಣೆಯಲ್ಲಿ ಮುಂದುಗಡೆ ಕಲ್ಲು ಗಾರೆಯ ಗೊಡೆಯೂ ಹಿಂದುಗಡೆ ಮಣ್ಣಿನ ಏರಿಯೂ ಇವೆ. ಈ ಗೋಡೆಯ ತಳಪಾಯವನ್ನು ಗಟ್ಟಿಬಂಡೆಯ ವರೆಗೂ ತೆಗೆದುಕೊಂಡು ಹೋಗಿ ಭದ್ರವಾಗಿ ಕಟ್ಟಿದೆ. ಹಿಂದುಗಡೆಯ ಏರಿಯನ್ನು ಸುಮಾರಾಗಿ ನೀರು ಜಿನುಗುವ ಮಣ್ಣಿನಿಂದ 2 ಅಡಿ ಮಟ್ಟಕ್ಕೆ 1 ಅಡಿ ಲಂಬದ ಇಳಿಕಲಿನಲ್ಲಿ ಕಟ್ಟಿದೆ. ಭದ್ರತೆಗಾಗಿ ಈ ಏರಿಯಲ್ಲಿ ಅಲ್ಲಲ್ಲಿ ಮಟ್ಟವಾದ ಜಗಲಿಗಳನ್ನು ಬಿಟ್ಟು ಇಳಿಕಲಿಗೆ ಹೆಪ್ಪನ್ನು ಕಟ್ಟಿದೆ. ಏರಿಯ ತಳದಲ್ಲಿ ಕಲ್ಲಿನ ಫಿಲ್ಟರುಗಳನ್ನು ಕಟ್ಟಿ ಒಳಕ್ಕೆ ಇಳಿಯುವ ನೀರು ಸರಾಗವಾಗಿ ಹೊರಗೆ ಹೋಗುವಂತೆ ಬಂಡೆಗಳಿಂದ ತುಂಬಿದೆ.

ನೀರಾವರಿಗೆ ತೂಬುಗಳನ್ನೂ, ವಿದ್ಯುತ್ತಿನ ಉತ್ಪಾದನೆಗಾಗಿ ಪೆನ್‍ಸ್ಟಾಕ್ ಪೈಪುಗಳನ್ನೂ ಅಣೆಯಲ್ಲಿ ಇಟ್ಟಿದೆ.  ಇದಲ್ಲದೆ ಮೊಗಲರ ಕಾಲಕ್ಕಿಂತಲೂ ಹಿಂದಿನ ನಾಲೆಗಳಿಗೆ ಅವಶ್ಯವಾದರೆ ನೀರನ್ನು ಬಿಡುವಂತೆ ಅನುಕೂಲವನ್ನು ಮಾಡಿದೆ. ಅಣೆಯ ಒಂದೊಂದು ದಡದಲ್ಲೂ ಒಂದೊಂದು ವಿದ್ಯುದಾಗಾರವಿದೆÉ. ಬಲದಂಡೆಯಿಂದ ಪೆನ್‍ಸ್ಟಾಕಿನ ತಳಮಟ್ಟ 1,550 ಅಡಿ (ಆರ್.ಎಲ್.) ಎಡದಂಡೆಯ ಪೆನ್‍ಸ್ಟಾಕಿನ ತಳ 10 ಅಡಿ ಎತ್ತರವಾಗಿದೆ. ಈ ವಿದ್ಯುದಾಗಾರ ಬೀಳುನೀರನ್ನು ನೀರಾವರಿಯ ನಾಲೆಗಳಿಗೆ ಒಯ್ದಿದ್ದಾರೆ.

ಅಣೆಯ ಎರಡು ದಡಗಳಲ್ಲಿಯೂ 1,585 ಅಡಿಗಳ (ಆರ್.ಎಲ್.) ಮಟ್ಟದಲ್ಲಿ ನೀರಾವರಿಗಾಗಿ ಮೇಲ್ಮಟ್ಟದ ತೂಬುಗಳಿವೆ. ಇವು ಮೇಲ್ಮಟ್ಟದ ನಾಲೆಗಳಿಗೆ ನೀರನ್ನು ಬಿಡುತ್ತವೆ. ಬಲದಂಡೆಯ ಮೇಲ್ಮಟ್ಟದ ನಾಲೆ ಬಳ್ಳಾರಿ ಜಿಲ್ಲಿಯ 2 ಲಕ್ಷ ಎಕರೆಗಳಿಗೂ ಅನಂತಪುರ, ಕರ್ನೂಲು ಮತ್ತು ಕಡಪ ಜಿಲ್ಲೆಗಳಲ್ಲಿ 2.4 ಲಕ್ಷ ಎಕರೆ ಪ್ರದೇಶಗಳಿಗೂ ನೀರನ್ನು ಒದಗಿಸುತ್ತದೆ. ಇದು 116 ಮೈ. ಹರಿದಮೇಲೆ ಗುಂತುಕಲ್ಲು ಶಾಖೆ, ಉರವಕೊಂಡದ ತೋಡು ಎಂಬ ಎರಡು ಸೀಳುಗಳಾಗುತ್ತವೆ. ಈ ತೋಡಿನಿಂದ ಪೆನ್ನಾರ್ ನದಿಯ ನೀರು 2,000 ಕ್ಯೂಸೆಕ್ಕುಗಳಷ್ಟು ಹೆಚ್ಚುತ್ತದೆ. ಇಲ್ಲಿ ನೀರು ಹರಿಯುವಾಗ 20,000 ಕಿಲೋವಾಟ್ ವಿದ್ಯುತ್ತು ಉತ್ಪತ್ತಿಯಾಗುತ್ತದೆ. ಪೆನ್ನಾರ್ ನದಿಗೆ ಅಡ್ಡಲಾಗಿ ಪೆನಕ ಚರಲದ ಹತ್ತಿರ ನಿಯಂತ್ರಕವನ್ನು ಕಟ್ಟಿ ಅದರಿಂದ ಉತ್ತರಕ್ಕೆ ಒಂದು, ದಕ್ಷಿಣಕ್ಕೆ ಒಂದು ನಾಲೆಚಿiÀುನ್ನು ಒಯ್ದಿದ್ದಾರೆ. ಚಿತ್ರಾವತಿ ನದಿಯ ಸಂಗಮದ ಕೆಳಗೆ ಈ ನದಿಗೆ ಅಡ್ಡಲಾಗಿ ಒಂದು ಅಣೆಅಣೆಯನ್ನು ಕಟ್ಟಿ ಕಡಪ ಮತ್ತು ಜಮ್ಮಲಮಡಗು ತಾಲ್ಲೂಕುಗಳಿಗೆ ನೀರನ್ನು ಸಾಗಿಸಿದ್ದಾರೆ. ಈ ನಾಲೆ ಒಂದು ಗುಡ್ಡವನ್ನು 1,016  ಅಡಿ ಉದ್ದವಾದ ಸುರಂಗದ ಮೂಲಕ ದಾಟುತ್ತದೆ. ಅನೇಕ ಕಡೆಗಳಲ್ಲಿ ಗುಡ್ಡದ ತಪ್ಪಲುಗಳಲ್ಲೂ ಆಳವಾದ ತೋಡುಗಳಲ್ಲೂ ಹೋಗಿ ಎರಡು ಕಮರಿಗಳನ್ನು ಪ್ರಬಲ ಕಾಂಕ್ರೀಟಿನ ಮೇಲುಗಾಲುವೆಯ ಮೇಲೆ ದಾಟುತ್ತದೆ.

ಎಡ ದಂಡೆಯ ಮೇಲ್ಮಟ್ಟದ ನಾಲೆಯ ತಳದ ಅಗಲ 84 ಅಡಿ, ಆಳ  14 ಅಡಿ, ತಳಮಟ್ಟ 1,585 ಅಡಿ (ಆರ್.ಎಲ್.). ಇದು ಪ್ರಾರಂಭದಲ್ಲಿ 2,000  ಕ್ಯೂಸೆಕ್ಕುಗಳ  ನೀರನ್ನು ಸಾಗಿಸುತ್ತದೆ. ಮೊದಲನೆಯ ಇಪ್ಪತ್ತು 20  ಮೈಲಿಗಳಲ್ಲಿ  ನಾಲೆ ಒರಟಾದ ಭೂಮಿಚಿiÀು ಮೂಲಕ ಹೋಗುತ್ತದೆ. ಇದಕ್ಕೆ ಕರ್ನಾಟಕದ ಗಡಿಯ ವರೆಗೆ 127 ಮೈಲಿಗಳ ಉದ್ದಕ್ಕೂ ನೆಲ ನೀರನ್ನು ಹೀರದ ಹಾಗೆ ಅಂಚನ್ನು ಕಟ್ಟಿದೆ.  ಈ ನಾಲೆ ರಾಯಚೂರು ಜಿಲ್ಲೆಯಲ್ಲಿ 5.8 ಲಕ್ಷ ಎಕರೆಗಳಿಗೆ ನೀರನ್ನು ಒದಗಿಸುತ್ತದೆ. ಈ ನಾಲೆ 19ನೆಯ ಮೈಲಿಯಲ್ಲಿ 3,557 ಉದ್ದದ ಸುರಂಗವನ್ನು ಪ್ರವೇಶಿಸಿ ಹೊರಬರುತ್ತದೆ. 70ನೆಯ ಮೈಲಿಯಲ್ಲಿ ಮಸ್ಕಿ ಹಳ್ಳವನ್ನು ದಾಟುವ ಪ್ರಬಲಿತ ಕಾಂಕ್ರೀಟಿನ ಮೇಲುಗಾಲುವೆ 37 ಅಡಿ ಅಗಲ, 13 ಳಿ ಅಡಿ ಎತ್ತರವಾಗಿದೆ. ಕಲ್ಲುಗಾರೆಯ ಕಂಬಗಳನ್ನು ಮರಳಿನಲ್ಲಿ 30 ಅಡಿ ಆಳಕ್ಕೆ ಇಳಿಸಿದೆ. ಅವು ಗುಂಡಾದ ಬಾವಿಗಳ ಮೇಲೆ ನಿಂತಿವೆ. ಹಳ್ಳದಲ್ಲಿ 45,540  ಕ್ಯೂಸೆಕ್ಸ್‍ಗಳ ಪ್ರವಾಹವನ್ನು ಸಾಗಿಸುವ, 46 ಅಡಿಗಳ ಅಗಲದ, 22 ಳಿ ಅಡಿ ಎತ್ತರದ 11 ಕಣ್ಣುಗಳಿವೆ. ಬಲದಂಡೆಯ ಕೆಳಮಟ್ಟದ ನಾಲೆ 225 ಮೈ. ಉದ್ದವಾಗಿದ್ದು, ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ 92,345 ಎಕರೆಗಳಿಗೂ, ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ 1,56,913 ಎಕರೆಗಳಿಗೂ ನೀರನ್ನು ಒದಗಿಸುತ್ತದೆ. ನಾಲೆಯ ಅಗಲ ಪ್ರಾರಂಭದಲ್ಲಿ 72 ಅಡಿ, ಆಳ 10 ಳಿ ಡಿ. ನಾಲೆಯ ತಳ 10,000 ಕ್ಕೆ 1 ರಂತೆ ಇಳಿದು ಸೆಕೆಂಡಿಗೆ 3 ಅಡಿ ವೇಗದಲ್ಲಿ 2,500  ಕ್ಯೂಸೆಕ್ಸ್ ನೀರನ್ನು ಸಾಗಿಸುತ್ತದೆ. ಇದರ ಕೆಳಗೆ ಒಟ್ಟು 8.6 ಲಕ್ಷ ಎಕರೆ ಭೂಮಿಯೂ ಬಳ್ಳಾರಿ ಜಿಲ್ಲೆಯ 82 ಮೈಲಿಗಳವರೆಗೆ 2.5 ಲಕ್ಷ ಎಕರೆ ಭೂಮಿಯೂ ಇವೆ. ಇದರಲ್ಲಿ 1 ಲಕ್ಷ ಎಕರೆಗೆ ನೀರು ದೊರಕುತ್ತಿದೆ. ಈ ನಾಲೆ 80ತ್ತನೆಯ ಮೈಲಿಯಲ್ಲಿ ಹಗರಿ ನದಿಯನ್ನು 35 ಅಡಿ ಕಣ್ಣಿನ 58 ಕಮಾನುಗಳ ಮೇಲುಗಾಲುವೆಯಲ್ಲಿ ದಾಟುತ್ತದೆ. ಮೇಲುಗಾಲುವೆ 12 ಅಡಿ ಅಗಲ, 9 ಳಿ  ಅಡಿ ಎತ್ತರವಾಗಿರುವ ಅವಳಿ ತೊಟ್ಟಿಗಳ ರೂಪದಲ್ಲಿ ಕೆಳಗಡೆ ಹೊಳೆ 1,85,000 ಕ್ಯೂಸೆಕ್ಸ್‍ಗಳ ಪ್ರವಾಹವನ್ನು ಸಾಗಿಸುತ್ತದೆ. ಇದೊಂದು ವಿವಿಧೋದ್ದೇಶ ಯೋಜನೆ. ನೀರಾವರಿಯೇ ಅಲ್ಲದೆ ವಿದ್ಯುದುತ್ಪಾದನೆ, ಜಲಯಾನ, ಮತ್ಸ್ಯೋದ್ಯಮ, ಪಟ್ಟಣಗಳಿಗೆ ನೀರಿನ ಸರಬರಾಜು ಮತ್ತು ವಿಹಾರಾನುಕೂಲಗಳು ಯೋಜನೆಯಲ್ಲಿ ಸೇರಿವೆ. ಮೀನಿನ ಕ್ಷೇತ್ರವೊಂದನ್ನು ರಚಿಸಲಾಗಿದೆ. 

ಈ ಕೆಲಸದಲ್ಲಿ ಉಪಯೋಗಿಸಲಾದ ಎಲ್ಲ ಕೋಡಿಗಳ ಮತ್ತು ತೂಬುಗಳ ಬಾಗಿಲುಗಳನ್ನೂ ಅಣೆಯ ಬಳಿ 1952ರಲ್ಲಿ ಸ್ಥಾಪಿತವಾದ ಕಾರ್ಖಾನೆಯಲ್ಲಿ ತಯಾರಿಸಲಾಗಿದೆ.							(ಎಚ್.ಸಿ.ಕೆ.)
ಪರಿಷ್ಕರಣೆ:
ಎಂ. ಜಿ. ಶ್ರೀನಿವಾಸನ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ